ಬೀತ್, ಜಾನ್ ಹೇ
1876-1952. ಇಂಗ್ಲಿಷ್ ಕಾದಂಬರಿಕಾರ ಮತ್ತು ನಾಟಕಕಾರ. ಐಯಾನ್ ಹೇ ಈತನ ಕಾವ್ಯನಾಮ. ಮ್ಯಾಂಚೆಸ್ಟರ್‍ನಲ್ಲಿ ಜನನ. ತಂದೆ ಜಾನ್ ಎ. ಬೀತ್. ತಾಯಿ ಅಲ್ಟ್ನಾಕೇಗ್. ಕೇಂಬ್ರಿಜ್‍ನ ಸೇಂಟ್ ಜಾನ್ಸ್ ಕಾಲೇಜಿನಲ್ಲಿ ವ್ಯಾಸಂಗಮಾಡಿ 1898ರಲ್ಲಿ ಕ್ಲಾಸಿಕಲ್ ಟ್ರೈಪಾಸ್ ಪಡೆದು ಪದವೀಧರನಾದ.

	ಮೊದಲ ಮಹಾಯುದ್ಧದಲ್ಲಿ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿದ. ಮಹಾಸಮರದ ವಸ್ತುವನ್ನೇ ಕುರಿತು ದಿ ಫಸ್ಟ್ ಹಂಡ್ರೆಡ್ ತೌಸೆಂಡ್ (1915) ಎಂಬ ಕಾದಂಬರಿಯನ್ನು ಕೆ-1 ಎಂಬ ಕಾವ್ಯನಾಮದಲ್ಲಿ ಬರೆದ. ಇದೊಂದು ವಿಶಿಷ್ಟ ಕಾದಂಬರಿ. ಅಲ್ಲದೆ ಈ ಬಗೆಯ ಕಾದಂಬರಿಗಳಲ್ಲಿ ಮೊದಲನೆಯದು. ಇದು ಅಮೆರಿಕದಲ್ಲಿ ಜನಪ್ರಿಯವಾಯಿತು. ಯುದ್ಧದ ವೇಳೆಗಾಗಲೇ ಐಯಾನ್ ಹೇ ಎಂಬ ಕಾವ್ಯ ನಾಮದಲ್ಲಿ ಆರು ಕಾದಂಬರಿಗಳನ್ನು ಬರೆದಿದ್ದ. ಈತನ ಸೈನಿಕ ಸೇವೆಗಾಗಿ ಮಿಲಿಟರಿ ಕ್ರಾಸ್ ಮತ್ತು ಸಿ.ಬಿ.ಐ. ಪ್ರಶಸ್ತಿ ದೊರೆತವು. ಹಲವಾರು ಸಂಸ್ಥೆಗಳಲ್ಲಿ ಗೌರವ ಸ್ಥಾನ ಪಡೆದ. ಎರಡನೆಯ ಮಹಾ ಯುದ್ಧದ ದಿನಗಳಂದು ಈತ ಸಮರ ಕಾರ್ಯಾಲಯದಲ್ಲಿ ಸಂಪರ್ಕಶಾಖೆಯ ನಿರ್ದೇಶಕನಾಗಿ ದುಡಿದ.

	ಶ್ರೇಷ್ಠ ಧನುರ್ವಿದ್ಯಾ ಪ್ರವೀಣ, ರಾಯಲ್ ಕಂಪನಿ ಆಫ್ ಆರ್ಚರ್ಸನ ಸದಸ್ಯ. ದೋಣಿ ನಡೆಸುವುದರಲ್ಲಿ ಮತ್ತು ಗಾಲ್ಫ್ ಆಟದಲ್ಲಿ ಆಸಕ್ತ. ಪ್ರಸಿದ್ಧ ಹಾಸ್ಯ ಲೇಖಕ ಪಿ.ಜಿ.ವೋಡ್‍ಹೌಸ್‍ನ ಪರಮ ಮಿತ್ರ. ಆತನ ಡ್ಯಾಮ್ಸೆಲ್ ಇನ್ ಡಿಸ್ಟ್ರೆಸ್ ಮತ್ತು ಬ್ಯಾಬ್ಯಾ ಬ್ಲ್ಯಾಕ್ ಷೀಪ್ ಕಾದಂಬರಿಗಳನ್ನು ನಾಟಕ ರೂಪಕ್ಕೆ ಅಳವಡಿಸಿದ (1929). ಈತ ಕೆಲವರೊಂದಿಗೆ ಸೇರಿಕೊಂಡು ಹಲವು ಕಾದಂಬರಿಗಳನ್ನು ಬರೆದ. ಅವುಗಳ ಪೈಕಿ ಗುಡ್‍ಲಕ್ (1923) ಸೆಮೂರ್ ಹಿಕ್ಸ್ ಜೊತೆಗೂ ದಿ ಮಿಡ್‍ಷಿಪ್ ಮೇಡ್ (1931) ಎಸ್.ಕೆ. ಹಾಲ್‍ನೊಂದಿಗೂ ಆರ್ಡರ್ಸ್ ಆರ್ ಆರ್ಡರ್ಸ್ (1932) ಅಂಥೋಣಿ ಆರ್ಮ್‍ಸ್ಟ್ರಾಂಗ್‍ನೊಂದಿಗೂ ಎ ಪ್ರೆಸೆಂಟ್ ಫ್ರಮ್ ಮಾರ್ಗೇಟ್ (1933) ಮೇಸನ್‍ನೊಂದಿಗೂ ಸೇರಿ ಬರೆದ ಕಾದಂಬರಿಗಳು, ಅಲ್ಲದೆ ಸ್ವತಃ ಹಲವಾರು ಸುಖಾಂತ ಕಾದಂಬರಿಗಳನ್ನೂ ಬರೆದಿದ್ದಾನೆ. ಈ ಎಲ್ಲ ಕೃತಿಗಳಲ್ಲಿ ಎಸ್.ಕೆ ಹಾಲ್‍ನೊಂದಿಗೆ ಬರೆದ ಆಡ್ಮಿರಲ್ಸ್ ಆಲ್ (1934) ಎಂಬ ಕಾದಂಬರಿ ಈತನ ಮೆಚ್ಚಿನ ಕೃತಿ. ಟೆಲಿ ಆಫ್ ಬ್ಲೂಮ್ಸ್‍ಬರಿ (1919), ಹೌಸ್ ಮಾಸ್ಟರ್ (1936) ಎಂಬವು ಇನ್ನೆರಡು ಒಳ್ಳೆಯ ಕಾದಂಬರಿಗಳು. ಈತನ ಕತೆಗಳಲ್ಲಿ ರಮ್ಯತೆ, ಲಾಘವತೆಗಳು ಆಕರ್ಷಕ ಗುಣಗಳು. 							
(ಕೆ.ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ